ಅಭಿಮಾನಿ

Archive for the ‘ನೆನಪುಗಳ ಮಾತು ಮಧುರ’ Category

ಅವಳ ಹೆಸರಲ್ಲಿ ಏನೂ ಬರೆಯಬಹುದು… ಹೌದೋ ಅಲ್ಲವೋ? ಗೊತ್ತಿಲ್ಲ. 
ಆದರೆ ಬರೆಯಲು ಕೂತಾಗ ಅವಳೇ ನನಗೆ ಸಾಮಗ್ರಿಯಾಗಿ ಬಿಡುತ್ತಾಳೆ. 
ನಾನೊಬ್ಬನೇ ಅಲ್ಲ. ಈ ಜಗದ ಸಾವಿರಾರು-ಲಕ್ಷಾಂತರ ಕೈಗಳಿಗೆ ಅವಳೇ 
ವಸ್ತುವಾಗಿ ಬಿಡುತ್ತಾಳೆ. ಅವಳೆಂದರೆ ಪ್ರೀತಿಸಿದ ಹೃದಯ, ಗೆಳತಿ, ಸಂಗಾತಿ, 
ಸಖಿ..
 ನಾನು ಇವಳನ್ನು ನೋಡುವ ಮೊದಲು ನಾನು ನಾನಾಗಿದ್ದೆ. ಒಬ್ಬ ಸಾಮಾನ್ಯ 
ಹುಡುಗ. ಗೆಳೆಯರ ಜೊತೆ ಆಡಿಕೊಳ್ಳುತ್ತಿದ್ದೆ. ಮಸ್ತ್ ಮಜವಾಗಿತ್ತು ಲೈಫು. ಇವಳ
 ಪರಿಚಯವಾದ ಮೇಲೆ ಒಂದು ಸಲ ನಾನು ಯಾಕೋ ಮೊದಲಿನಂತಿಲ್ಲ ಅನಿಸಿತು. 
ಅನಿಸಿಕೆ ಹಾಗೆ ಮುಂದುವರಿಯಿತು. ನನಗಿಂತ ಮೊದಲೇ ಇವಳ ಸಂಗಕ್ಕೆ ಬಂದ
 ಎಷ್ಟೋ ಕೈಗಳು ರಚಿಸಿದ ಸಾಲುಗಳು ನನಗೀಗ ಅರ್ಥವಾಗತೊಡಗಿದವು. ಅವರ
 ಉತ್ಸುಕತೆ, ವಿರಹ, ಪ್ರೇಮ ಅರ್ಥವಾಗುತ್ತಿದೆ ಅನಿಸಿತು. ಅವಳನ್ನು ನೋಡಿದ 
ಮೇಲೆ ಸ್ವರ್ಗದ ಅಪ್ಸರೆ ನೋಡುತ್ತಿದ್ದೇನೆ ಅನ್ನಿಸಿತು. ಲತೆ, ಹಂಸ, ಕೋಗಿಲೆ, ನವಿಲುಗಳು
 ಹೋಲಿಕೆಗೆ ಬಂದವು. ಇವಳ ಸುತ್ತುವ ಹುಡುಗರೆಲ್ಲಾ ನನ್ನಾಕೆಯ ಚೆಲುವೆಗೆ 
ಚುಚ್ಚುವ ದುಂಬಿಗಳು ಅನ್ನಿಸುತ್ತಿತ್ತು. ಅವಳ ಪರಿಚಯವಾಯಿತು. ಅದು ಸ್ನೇಹವಾಯಿತು.
 ನಂತರ ಪ್ರೇಮ. ಜೀವನದಲ್ಲಿ ಇದಕ್ಕಿಂತ ಮಧುರವಾದದ್ದು ಯಾವುದು ಇಲ್ಲ ಅನಿಸಿತು. 
ಅದು ಈಗಲೂ ಮಧುರವಾದದ್ದು ಕೂಡ. ಅವಳ ನಗು ಮುಖ ನನ್ನನ್ನು ಯಾವಾಗಲು
 ಸೆಳೆಯುತ್ತಿತ್ತು. ಆ ಕಣ್ಣುಗಳ ಸೆಳೆತ ಈಗಲೂ ನನ್ನ ಕಾಡುತ್ತಿದೆ. ಅವಳು ಮುನಿಸಿಕೊಂಡರೆ,
 ಸಣ್ಣ ಹುಸಿಕೋಪ ತೋರಿದರೆ ನಾನು ನನಗೇನೂ ಗೊತ್ತಿಲ್ಲದಂತೆ ನಟಿಸುತ್ತಿದ್ದೆ. ನನಗೆ
 ಅವಳ ಹುಸಿಕೋಪದ ಮುಖ ನೋಡಬೇಕಿತ್ತು. ನೋಡಿ ಮನಸ್ಸಿನಲ್ಲಿಯೇ ಆನಂದಗೊಂಡಿದ್ದೆ.
 ಅಲ್ಲಿಯೂ ಅವಳ ಮುಖ ನನ್ನನ್ನು ಕಾಡುತ್ತಿತ್ತು. ನಂತರ ನಿಧಾನವಾಗಿ ನನ್ನ ತಲೆ ಮೇಲೆ
 ಹೊಡೆಯುತ್ತಿದ್ದಳು. ತಲೆ ಕೂದಲನ್ನು ಕೆದರಿಸಿ ಬಿಡುತ್ತಿದ್ದಳು. ನಾನು ’ಹೇ ಛೇ‘, ಅಂದಾಕ್ಷಣ
 ನಗುತ್ತಿದ್ದಳು. ಆ ನಗು ನನಗೆ ಸಾಕಾಗಿತ್ತು. ಇಷ್ಟೇನ? ಇಲ್ಲ. ಅವಳೆಂದರೆ ಸಂತೋಷದ
 ಭಂಡಾರ. ಅಪಾರ. ಆದರೆ ವಿಧಿಯ ಎಣಿಕೆಯೆ ಬೇರೆಯಾಗಿತ್ತು. ಆ ಭಂಡಾರ ಈಗ 
ಬೇರೆಯವರ ಸ್ವತ್ತು. ಆದರೆ ಕಾಡುವ ಕಣ್ಣುಗಳೇ ನನಗೆ ಸ್ಪೂರ್ತಿ. ಆ ಕಣ್ಣುಗಳನ್ನ ಮಾತ್ರ
 ಇಂದು ನೆನಪಿನಲ್ಲಿಟ್ಟುಕೊಂಡಿದ್ದೇನೆ. ಅವಳನ್ನು ಮರೆಯುತ್ತಿದ್ದೇನೆ.
 ಅವಳ ನೆನಪು ಎಂದಿಗೂ ಹಸಿರು ನನ್ನೊಂದಿಗೆ. ನನ್ನ ಹಾಗೆ ಸಿಕ್ಕ ಬೇರೆ ಕೈಗಳ ಹೃದಯಗಳಿಗೆ.

Tags:

ಹಾಯ್ ಲಿಲ್ಲಿ,
ನಾನು ಬರೆಯೋದನ್ನ ನಿಲ್ಲಿಸೋ ಕಾಲ ಬಂದಿದೆ ಅನ್ನಿಸುತ್ತೆ. ಅಷ್ಟಕ್ಕೂ ನಾನು ಏನು ಬರೆದಿಲ್ಲ. 
ನಿನಗೆ ಒಂದು ಪತ್ರವನ್ನು ಬಿಟ್ಟು. ಅದನ್ನು ನಾನು ಕೊಡದೇ ಇಟ್ಟುಕೊಂಡುಬಿಟ್ಟೆ (ನಿನಗೆ ಕೊಡಲು ಹೆದರಿಕೆಯಾಗಿ). 
ಹೋಗಲಿ ಬಿಡು. ನಾನು ಈಗ ಬರೆಯೋ ಕಾಗದ ಕೂಡ ನಿನಗೆ ತಲುಪದೇ ಇರಬಹುದು, ನಾನು
ನಿನ್ನ ತಲುಪದೇ ಇರೋ ಹಾಗೆ. ಮನಸ್ಸಿನಲ್ಲಿರೋ ಪ್ರೀತಿ ನಿನಗೆ ಅರ್ಥ ಆಗುತ್ತಾ ಅನ್ನೋದೇ
ನನಗಿರುವ ಸಂಶಯ. ಇಷ್ಟು ಕಾಲ ನಿನ್ನ ಹೆಸರಿನಲ್ಲೇ ಕೆಲವು ಸಾಲುಗಳನ್ನ ಬರೆಯುತ್ತಿದ್ದೆ. ಅದಕ್ಕೆ
ಕೆಲವೊಂದು ಸಲ ಪದ್ಯ ಎನ್ನುತ್ತಿದ್ದೆ, ಕೆಲವೊಂದು ಸಲ ಗದ್ಯ ಎನ್ನುತ್ತಿದ್ದೆ. ಮುಂದೆ ಏನೆಂದು ಹೇಳುವುದು?
ನೀನು ನನ್ನ ಬಿಟ್ಟು ಹೊರಟು ನಿಂತಿದ್ದೀಯ. ನನ್ನಲ್ಲಿರುವ ಕೆಲವು ಸಾಲುಗಳು ಹೊರಬರುತ್ತಿವೆ. ಇವೆ ಕೊನೆಯ
ಸಾಲುಗಳೇನೋ? ಬಹುಶಃ ನಿನಗೆ ಅನ್ನಿಸಿರಬಹುದು ನನ್ನಲ್ಲಿ ಪ್ರೀತಿಯೆಂಬುದು ಬಾರಿ ಆಕರ್ಷಣೆಯಾಗಿತ್ತು
 ಮತ್ತು ಅದೀಗ ಸತ್ತು ಹೋಗಿದೆಯೆಂದು. ನಿಜ ಹೇಳ್ತೀನೇ, ಲಿಲ್ಲಿ. ಅದು ಸಾಯುವ ಕೂಸಲ್ಲ. ಅದು ಬಂಡೆಗಲ್ಲು. 
ಒಡೆದರೆ ಚೂರಾಗಿ ಮಣ್ಣಾಗುವುದು. ನೆಲದ ಮೇಲೋ, ನೀರಿನ ಕೆಳಗೋ ಇದ್ಡುಬಿಡುತ್ತೆ. ಅದರ
ಪಾಡಿಗೆ ಅದು.
ನಾನು ನಿನಗೆ ಇಷ್ಟ ಆಗಿಲ್ಲ ಅನ್ನೋದು ನನಗೆ ಗೊತ್ತು. ಯಾಕೆಂದರೆ ನಿನ್ನಲ್ಲಿರುವ ಹಣ, ಗುಣ, ರೂಪ
ಯಾವುದು ನನ್ನಲ್ಲಿಲ್ಲ. ನಿನಗೆ ಇಷ್ಟವಾಗೋ ಹುಡುಗ ಹೇಗಿರಬೇಕು ಅನ್ನೋದು ನನಗೆ ಗೊತ್ತಿಲ್ಲ. ನಿನ್ನ ತಂದೆ 
ತಾಯಿ ತೋರಿಸಿದ ಹುಡುಗನನ್ನೇ ನಿನ್ನ ತಮ್ಮನಿಗೆ ಭಾವನನ್ನಾಗಿ ಮಾಡುತ್ತೀಯೆಂದು ನನಗೆ ಗೊತ್ತು. ಅದೆಲ್ಲ
ಹಾಳಗಿ ಹೋಗಲಿ ಬಿಡು. ಒಟ್ಟಾರೆ ನೀನು ನನ್ನನ್ನ ಮರೆತು, ಮತ್ತೆಂದೂ ಕಾಣಿಸಿಕೊಳ್ಳದಂತೆ ಸಂತೋಷವಾಗಿ
 ಹೋಗುತ್ತಿದ್ದೀಯ. ನಾನು ನಿಸ್ವಾರ್ಥ ಪ್ರೇಮಿಯಾಗಬೇಕೆಂದಿದ್ದೆ. ಆದರೆ ನಿನ್ನ ಪ್ರೀತಿ ಹಮ್ಬಲಿಸಿ ಸ್ವಾರ್ಥಿಯಾದೆ.
ನಿನ್ನ ಆಸೆ-ಕನಸುಗಳು ಚಿರಾಯುವಾಗಲಿ. ನನ್ನ ಪ್ರೀತಿ ಸಾಯದಿರಲಿ.
ಕೊನೆಗೊಳ್ಳದ ಪ್ರೀತಿಯಿಂದ
ರಾಜ್

ದೀಪಾವಳಿಯ ನೆನೆದು

Posted by: sundaranadu on: October 20, 2008

ಕೈಯಲ್ಲಿ ಎಣ್ಣೆ ಕ್ಯಾನ್ ಹಿಡಿದು
ಅಮ್ಮ ಇಟ್ಟ ದೀಪಗಳ ಕಡೆಗೆ ನಡೆದು
ಬತ್ತಿ ಸರಿಮಾಡಿ ಎಣ್ಣೆ ಸುರಿದು
ದೀಪ ಹಚ್ಚಿದ ನೆನಪು…
ಅಪ್ಪ ಮನೆಯ ಹೊರಗೆ
ಬಲ್ಬಿನ ದೀಪದ ಮಾಲೆಯ ಹಚ್ಚಿ
‘ನೋಡೋ ಹೆಂಗೆ‘ ಅಂದಾಕ್ಷಣ
‘ಎಲ್ಲ ಸೂಪರ್, ಆದರೆ ಇನ್ನೊಂದು
ಲೈನ್ ಹಾಕಬೇಕಿತ್ತು‘ ಅಂತಿದ್ದೆ
ಅಪ್ಪನ ಬಳಿ ಹತ್ತು ರೂಪಾಯಿ
ಅಮ್ಮನ ಹತ್ತಿರ ಐದು ರೂಪಾಯಿ
ಅತ್ತು ಕರೆದು ಪೀಕುತ್ತಿದ್ದೆ
ಎದ್ದು ಬಿದ್ದು ಅಂಗಡಿಗೆ
ಓಡಿದ ನೆನಪು
ಕೈಯಲ್ಲಿ ತರಚಿದ ಗಾಯದ ಕುರುಹು…
ಚಿನಕುರುಳಿ, ರಾಕೆಟ್ ಹಿಡಿದು ಆಡಿದ ನೆನಪು
ತಮ್ಮನ ರಾಕೆಟ್ ಎಗರಿಸಿ ಹಾರಿಸಿದ್ದು
ಅದು ಯಾರದೋ ಬೆನ್ನಿಗೆ ಗುದ್ದಿದ್ದು
ನಂತರ ಹೊಡೆದಾಟ…
ಇಂದು ತರಹೇವರಿ ಪಟಾಕಿಯುಂಟು
ಹಬ್ಬಕೆ ಹೋಗುವ ಆಸೆಯೂ ಉಂಟು
ಹಣಕ್ಕೆ ಅಪ್ಪನ ಕೇಳುವ ಹಾಗಿಲ್ಲ
ಬೇಡುತಲಿರುವೆನು ದೇವರ, ಕಂಪನಿ ನನಗೆ
ನಾಲ್ಕು ದಿನ ರಜೆ ನೀಡಲಿ ಎಂದು

ನೋಡಿ ಆನಂದಿಸಿ…..

Posted by: sundaranadu on: September 26, 2008

ಸ್ನೇಹಿತರೊಬ್ಬರು ಕಳುಹಿಸಿದ್ದು. ನೀವು ನೋಡಿ ಆನಂದಿಸಿ………

ಕಥೆ ಹೇಳೋದಾಗಲಿ….

Posted by: sundaranadu on: September 23, 2008

ಕಥೆ ಹೇಳೋದಾಗಲಿ, ಕಥೆ ಬರೆಯೋದಾಗಲಿ ಒಂದು ಕಲೆ. ಕಥೆಯೊಂದನ್ನ ತೆರೆದು ಓದುತ್ತಾ
 ಅಥವಾ ಕೇಳುತ್ತಾ ಕುಳಿತರೆ, ನಮ್ಮ ಎದುರಿಗೆ ಘಟನೆಗಳು ನಡೆಯುತ್ತಿವೆ ಅಥವಾ ನಮ್ಮ
 ಕಥೆಯೇನಾದರೂ ನಾವೇ ಓದುತ್ತಿದ್ದೇವೆ ಅನ್ನಿಸಿಬಿಡಬೇಕು. ಕಥೆಯೆನ್ದ್ರೆ ಹಾಗಿರಬೇಕು.
ನಮ್ಮಲ್ಲಿ ಅಂತಹ ಹತ್ತಾರು ಕಥೆಗಾರರು ಇದ್ದಾರೆ, ಇದ್ದರು. ರವಿ ಬೆಳಗೆರೆ, ಕೆ. ಪಿ. ಪೂರ್ಣಚಂದ್ರ 
ತೇಜಸ್ವಿ. (ನಾನು ಹೆಚ್ಚಿಗೆ ಓದಿದ್ದು ಇವರ ಬರಹಗಳನ್ನೇ). ಕೆ. ಪಿ. ಪೂ. ಅವರ ಕಾಡಿನ ಕಥೆಗಳನ್ನ
 ಓದುತ್ತಿದ್ದರೆ ಕಾಡಿನ ದೃಶ್ಯಗಳು, ಅಲ್ಲಿನ ಆಗಿನ ಜನ ಜೀವನ, ನರಭಕ್ಷಕಗಳ ಭಯಾನಕ 
ದೃಶ್ಯಗಳು ನಮ್ಮ ಕಣ್ಮುಂದೆ ಬರುತ್ತವೆ. ರವಿ ಬೆಳಗೆರೆಯವರ ಕಾದಂಬರಿಗಳನ್ನ ಓದೋಕೆ ಶುರು 
ಮಾಡಿದರೆ ಅದನ್ನ ಓದಿ ಮುಗಿಸೋ ತನಕ ಏನು ಬೇಡವಾಗುತ್ತೆ. (ನಾನು ಓದಿದ್ದು ’ನೀ ಹೀಂಗ 
ನೋಡಬೇಡ ನನ್ನ‘, ನೀವು ಓದಿಲ್ಲದಿದ್ದರೆ ಒಮ್ಮೆ ಓದಿ ನೋಡಿ, ಇದು ನನ್ನ ರಿಕ್ವೆಸ್ಟ್). ಹೀಗೆ ಓದಿಸಿಕೊಳ್ಳೋ 
ಲೇಖಕರು ಬೇಕು ನಮಗೆಲ್ಲ. ಬಹುದೊಡ್ಡ ನಿಘಂಟು ಇಟ್ಕೊನ್ದು, ಲೇಖನಗಳನ್ನ, ಕಥೆ, ಕಾದಂಬರಿ 
ಓದೋದು ನನಗೆ ಸಾಧ್ಯವಿಲ್ಲ. ಮತ್ತೊಂದು ಹೆಸರನ್ನ ಹೇಳೋದು ಮರೆತೆ. ನರಸಿಂಹಯ್ಯನವರು. ಅವರ 
ಪತ್ತೇದಾರಿ ಕಾದಂಬರಿಗಳು ಸೂಪರ್.
ನಮ್ಮ ಬ್ಲಾಗ್‌ಗಿಗರು ಏನು ಕಡಿಮೆ ಇಲ್ಲ. ಅವರು ಬೆರೆಯೋ ಬರಹಗಳು ನಿಜ ಜೀವನದ ಘಟನೆಗಳೇ ಆಗಿವೆ. 
ಅವರ ಬರವಣಿಗೆಯ ಶೈಲಿ ಕೂಡ ಚೆನ್ನಾಗಿದೆ. ನನಗೆ ಈಗೆಲ್ಲ ಬರೆಯೋಕೆ ಆಗಲ್ಲ ಅನ್ನೋದೇ ಹೊಟ್ಟೆ 
ಉರಿಯ ಮಾತು.
ಏನು ಬರೀಬೇಕು ನನಗೆ ಗೊತ್ತಾಗ್ತಿಲ್ಲ. ನನಗೆ ಅನ್ನಿಸ್ಸಿದ್ದನ್ನ ನಾನು ಬರೆದೆ. ನಿಮಗೆ ಅನ್ನಿಸ್ಸಿದ್ದನ್ನ 
ನೀವು ಬರೆಯಿರಿ. ಆದರೆ ನನಗೂ ಕಲಿಸಿಕೊಡಿ.

ನನ್ನ ಮೊದಲ ಲವ್ ಲೆಟರ್

Posted by: sundaranadu on: July 15, 2008

ಹೈ ಡಿಯರ್ ಲಿಲ್ಲಿ,
ಹೌ ರ್ ಯು? ಈ ಲೆಟರ್ನ ಪೂರ್ತಿಯಾಗಿ ಓದು. ಇದು ನನ್ನ ಮೊದಲ ಲವ್ ಲೆಟರ್. ಹಾಗಾಗಿ ಈ ಲೆಟರ್ ಅನ್ನು ಮೊದಲಿನಿಂದ ಕೊನೆಯವರೆಗೆ ಸಂಪೂರ್ಣವಾಗಿ ಓದು, ನಂತರ ನೀನು ಪ್ರೀತಿಸದೇ ಹೋದರೂ ಪರವಾಗಿಲ್ಲ.
ನಾನು ರಾಜ್, ಎಮ್.ಎನ್.ಸಿ. ಕಂಪನಿ ಒಂದರಲ್ಲಿ ಕೆಲ್ಸ ಮಾಡ್ತಿದ್ದೀನಿ. ನಾನು ಕೆಲ್ಸ ಮಾಡೋ ಕಡೆ ಹತ್ತಾರು, ನೂರಾರು ಹುಡ್ಗೀರನ್ನ ನೋಡಿದ್ದೀನಿ. ನನ್ನ ಮನೆಯ ಎದುರುಗಡೆ ಲೇಡೀಸ್ ಪಿ.ಜಿ. ಇದೆ. ಅಲ್ಲೂ ಹತ್ತಾರು ಹುಡ್ಗೀರು ಇದ್ದಾರೆ. ನೋಡಲಿಕ್ಕೆ ಚೆನ್ನಾಗಿರೋರು ಇದ್ದಾರೆ. ಆದರೆ [...]

ಮಳೆಗಾಲದ ಒಂದು ಮುಸ್ಸಂಜೆ

Posted by: sundaranadu on: May 26, 2008

 ಮಳೆಗಾಲದ ಒಂದು ಮುಸ್ಸಂಜೆ ಅದು. ಮಳೆ ಆಗ ತಾನೇ ಮುಗಿದಿತ್ತು. ಸಣ್ಣಗೆ ತಣ್ಣನೆ ಗಾಳಿ 
ಬೀಸುತಿತ್ತು. ಆ ಮಧುರವಾದ, ತಣ್ಣನೆ ಸಂಜೆಯಲಿ ನನ್ನವಳ ನೆನಪು ಕಾಡುತಿತ್ತು. ಮರದ 

ಹನಿಗಳು ನಿಲ್ಲುವಂತಾಗಿದ್ದರು, ನೆನಪಿನ ಹನಿಗಳು ನಿಂತಿರಲಿಲ್ಲ.
 
ನಿನ್ನ ಹೆಸರು ನೆನೇದರೇನೆ
ಸುರಿವುದಲ್ಲ ಪ್ರೀತಿಯ ಸೋನೆ
ಈ ತನ್ಗಾಳಿಯಲು…..
ನಿನ್ನ ನೆನಪೆನೇ
 
ಅವಳ ಹೆಸರು ಬೇಡ. ಆ ಹೆಸರಲ್ಲೆ ಏನೋ ಇದೆ. ನೆನೆದಷ್ಟು ದಟ್ಟ. ಆದರೆ ನೆನೆಯೋದಕ್ಕೆ 
ಒಂದು ಸಲವಾದರು ಮರೀಬೇಕಲ್ಲ. ಅವಳ ಹೆಸರು ಹಾಗೇನೆ.
 
ಮರೆಯಬಾರದೇ ಮನವು ನಿನ್ನನು
ಮರೆತೆಯೆನ್ದರೆ ಅಯ್ಯೋ ಮರೆವೆ ನನ್ನನು
ಹೇಳೆ ಚೆಲುವೆ……..
ಮರೆಯದೇ ನೀ ಕಾಡುತಲಿರುವೆ
 
ಮನೆಬಿಟ್ಟು ಹಾಗೆ ಸುತ್ತಾಡಿಕೊಂಡು ಬರೋಣೇವೆಂದು ಪಾರ್ಕಿನ ಕಡೆಗೆ ಹೊರಟೆ. ಎಲೆಗಳ 
ಮೇಲೆ ಕೂತ ಮಳೆ ಹನಿಗಳು, ಅವಳ ಜಪ ಮಾಡುತ್ತಿರುವಂತೆ ಕಂಡವು. ನನಗೆ ಅದನ್ನು 
ಸಹಿಸಲಾಗದೆ, ಅವುಗಳನ್ನು ಮೆಲ್ಲಗೆ ಅಲ್ಲಾಡಿಸಿದೆ. ಎಲೆಯ ಮೇಲಿದ್ದ ಹನಿಗಳೆಲ್ಲ ಅವಳ 
ಹೆಸರನ್ನೇ ಹೇಳುತ್ತಾ ಉದುರಿದವು. ಆಗ ಮಾತ್ರ ಏನನ್ನೋ ಕಳೆದುಕೊಂಡಂತೆ ಅನಿಸಿತು.
 
ನಿನ್ನ ಹೆಸರನ್ನೇ ಹೇಳುತಲಿದ್ದವು
ಸಾಲು ಮಳೆ ಹನಿ
ನಿನ್ನ ಜಪವ ಮಾಡುತ
ಹೇಳಿ ಧನ್ಯನೆನ್ನುತ
 
 ಭಾರವಾದ ಹೆಜ್ಜೆಗಳೊಡನೆ ಹೋಗಿ ಪಾರ್ಕಿನ ಬೆಂಚಿನ ಮೇಲೆ ಕುಳಿತೆ. ಮಳೆಗೆ ತೊಯ್ದ 
ಹಕ್ಕಿಗಳು ತಮ್ಮ ರೆಕ್ಕೆಗಳನ್ನು ಶುಭ್ರ ಮಾಡಿಕೊಳ್ಳುತ್ತಿದ್ದವು. ಅಳಿಲು ಅತ್ತಿಂದಿತ್ತ ಏನೋ 
ಹುಡುಕುತ್ತಿತ್ತು. ಹೂಗಳು ಮಳೆ ಭಾರಕ್ಕೆ ಹಾಗೆ ಬಾಗಿದ್ದವು. ನಾನು ಹೀಗೆ ಏಕೆ ಎಂದು ಕೇಳಿದೆ.
 ಆಗ…
 
ನಿನ್ನ ಪ್ರೀತಿಯ ವರ್ಷಧಾರೆಯ
ನಾ ತಡೆವುದು ಹೇಗೆನ್ದಿತು ಹೂ
ಪ್ರೀತಿಯಿಲ್ಲದೇ ಬೇಯುತಲಿದ್ದ
ಅಳಿಲು ಸೂಸಿತು ಅಕ್ಕರೆಯ ನಗುವು
 
ಆಗ ಮತ್ತೆ ಮನಸ್ಸಲ್ಲಿ ಗಾಢವಾಗಿ ಕಾಡಲಾರಮ್ಭಿಸಿತು ಅವಳು ಮತ್ತು ಅವಳ ಪ್ರೀತಿ. 
ಎಂದು ನೋಡುವೆನು ಅವಳನ್ನು ಎನ್ನುತಾ ಮನಸ್ಸು ಲೆಕ್ಕಾಚರದಲ್ಲಿ ತೊಡಗಿತು. ಮೋಡದ 
ಯಾವುದೋ ತೀರದಲ್ಲಿ ಮಿಂಚು ಕಾಣಿಸಿಕೊಂಡಿತು. ಮತ್ತೊಮ್ಮೆ ಮಳೆ ಆಗುವುದು ಎಂದು-
-ಕೊಂಡು, ಮನೆಗೆ ಹೊರಡಲು ಅನುವಾದೆ. ಆಗ ನನ್ನ ಹುಡುಗಿ ಕಾಣಿಸಿಕೊಳ್ಳಲು, ಮತ್ತೆ 
ಶುರುವಾಯಿತು ಪ್ರೀತಿಯ ಮಳೆ.

ಮತ್ತೆ ಸುರಿವುದೆನ್ದು ನಿನ್ನ ಪ್ರೇಮಧಾರೆ
ಮನವು ಎಣಿಸುತಿರಲು
ಮಿಂಚಾಗಿ ಬಳಿ ಬಂದೆ
ಪ್ರೀತಿಯ ಮಳೆ ಕರೆದೆ

ನೆನಪಾಗುತಿದೆ ಯಾಕೋ ಇಂದು……

Posted by: sundaranadu on: April 15, 2008

ನೆನಪಾಗುತಿದೆ ಯಾಕೋ ಇಂದು
ನಲುಗಿ ಹೋದ ಪ್ರೀತಿಯೂ
ನೋವಲ್ಲು ಕಚಗುಳಿಯಿಟ್ಟು
ನಗಿಸಿ ಹೋದ ಪ್ರೀತಿಯೂ
ನೆನೆಯ ಬಾರದೆಂದೂ ಬಯಸಿದಷ್ಟು
ನೆನಪಾಗುವೆ ಯಾಕೆ ಪ್ರೀತಿಯೆ?
ನೋವಲ್ಲು ನಲಿವಲ್ಲು ಕಾಡುವುದೇ
ನಿನ್ನ ರೀತಿಯೇ
ನೆನಪಾಗುತಿದೆ ಯಾಕೋ ಇಂದು
ನಾನಂದುಕೊಂಡಷ್ಟು ದೂರ ನೀನಿಲ್ಲ
ನಾನು ಕರೆದರು ನೀ ಬರುವ ಹಾಗಿಲ್ಲ
ನನ್ನೊಲವೆಲ್ಲ ನೀನೆ ಆದರೂ
ನೀನಿಲ್ಲದೇ ಏನು ಇಲ್ಲಿಲ್ಲ
ನರಳುತಿದೆ ಪ್ರೀತಿಯಲಿ ಮನವು ಇಂದು……….

ಗಣೇಶ

Posted by: sundaranadu on: April 15, 2008

ಎಷ್ಟು ನೆನೆದರು ಮುಗಿಯದು ತಂದೆ
ನಿನ್ನಯ ಗುಣಗಾನ
ಸರ್ವರಲು ನೆಲೆಸಿ ಕಾಪಾಡುತಲಿರುವೆ
ಜಯ ಶ್ರೀ ಗಜಾನನ
 
 ನಿನ್ನ ನಾಮವ ನೆನೆಯುತಲಿದ್ದರೆ
ಇಲ್ಲ ಯಾವ ಪಾಪ, ಭಯ
ನೂರೆಂಟು ನಾಮದ ಗುರುವೇ
ನೀ ಮುನಿದರೆ ಜಗ ಪ್ರಳಯ
 
 ಸಿದ್ಧಿಗೂ, ಬುದ್ಡಿಗೂ
ಅಧಿನಾಯಕ ನೀನೆ
ಕಷ್ಟಗಳ ತೊಲಗಿಸಿ
ದಾರಿಯ ತೋರೊ ವಿನಾಯಕನೆ

ಮರೆ ನೀ ಮೌನ

Posted by: sundaranadu on: April 15, 2008

ಮೌನ ಮುರಿಯಬಾರದೇ
ಮನದ ಮಾತು ಕೇಳದೇ
ಮನವ ಕದ್ದು ಅದರೊಳಗಿದ್ದು
ಮೆರೆವ ಪ್ರೀತಿಯೇ 

ಮಾತೆ ಮುತ್ತು
ಮಾತೆ ಮೃತ್ಯು
ಮರೆತು ಹೋಯಿತೆ
ಮಾತನಾಡದೇ ಮೃತ್ಯು ತೋರಿಸಿ
ಮೆರೆವ ಪ್ರೀತಿಯೇ 

ಮೌನ ರಾಗವ
ಮರೆಯೇ ನನ್ನ ಮಲ್ಲಿಗೆ
ಮಾತು ಕೊಡುವೆನು ನಿನಗೆ
ಮತ್ತಾರ ನೆನೆಯೆನು
ಮುಗಿಲ ಅಪ್ಸರೆ ಬಂದರೂ
ಮರೆವುದಿಲ್ಲ ನನ್ನ ಪ್ರೀತಿಯೇ


All articles, poems and writings are written by myself (Sundaranadu) except Kannada SMS and Proverbs. ಇಲ್ಲಿ ಬರೆದಿರುವ ಎಲ್ಲ ಲೇಖನಗಳು, ಕವಿತೆಗಳು, ಬರಹಗಳು (ಕನ್ನಡ ಗಾದೆಗಳು ಮತ್ತು ಏಸ್ಸೆಮ್ಮೆಸ್ಸು ಹೊರತುಪಡಿಸಿ) ನನ್ನ (ಸುಂದರನಾಡು) ಸ್ವಂತದ್ದಾಗಿವೆ. ಸುಂದರನಾಡಿಗೆ ಬಂದು ಹೋದವರು Locations of visitors to this page

ಸುಂದರನಾಡಿನ ಅತಿಥಿಗಳು

  • 12,167