ಅಭಿಮಾನಿ

ನಾ ನಿಮಗೆ…


6 ಟಿಪ್ಪಣಿಗಳು

ನಿದ್ದೇನ ಕದ್ದವಳು

ಬರೆಯುವ ಮೊದಲೆ ಅಕ್ಷರವ ಕದಿಯೋಳು

ಬರೆದಾದ ಮೇಲೂ ನಿದ್ದೇನ ಕದ್ದವಳು

ನನ್ನೆದುರಿಗೆ ಬಂದಾಗ ಏನು ಮಾಡಲಿ

ಅವಳೇನಾದರೂ ಕೇಳಿದರೆ ಏನು ಹೇಳಲಿ?

 

ಕಣ್ಣ ನೋಟವ ಕದ್ದು ಎಲ್ಲೋ ಬಚ್ಚಿಟ್ಟು

ಎಲ್ಲಿ ಏನು ಹುಡುಕುವೆ ಎಂದು ಕೇಳೋವಳು

ಮಾತಿಗೆ ಎದುರಾಡದೆ ನಿಂತಾಗ

ನಕ್ಕು ಓಡಿದರೆ ನಾನೇನೂ ಮಾಡಲಿ?

 

ಕದ್ದ ಮಾಲು ಪಡೆಯುವುದಾದರು ಹೇಗೆ

ಕದ್ದ ಕನಸು, ಮನಸು ಬರುವುದೇ ಹಾಗೆ

ನೀವಾದರೂ ಸ್ವಲ್ಪ ಹೇಳಿ ಅವಳಿಗೆ

ಈಗಲಾದರೂ ತಂದು ಕೊಡಲಿ, ಇಲ್ಲವಾದರೆ ಅವಳ ಮನಸ್ಸು ಕೊಡಲಿ


2 ಟಿಪ್ಪಣಿಗಳು

ಗುರು ಮತ್ತು ದಾರಿ

ಎಲ್ಲೋ ಹೊರಡಲು ನಿಂತಿರುವೆ

ನಿಂತು ಯಾರಿಗೋ ಕಾಯುತಿರುವೆ

ಎಲ್ಲಿಗೆ ಹೋಗುವುದು ತಿಳಿಯದಾಗಿದೆ

ಜೊತೆಗೆ ಬರುವವರು ಯಾರೋ?

ನೋವು-ನಲಿವಿನ ಬುತ್ತಿಯುಂಟು

ಆಲಸ್ಯ-ಅನುಭವದ ಗಂಟು ಉಂಟು

ಅನುಭವದ ಗಂಟು ಹೊರುವುದು ಹೇಗೊತಿಳಿಯದಾಗಿದೆ

ನೋವು ಆಲಸ್ಯಗಳ ಗಂಟನ್ನಿಳಿಸುವರಾರೋ?

ಗಾಢ ಅಂಧಕಾರದ ಊರಲಿ

ಬೆಳಕ ನೀಡಲು ಬೇಕಿದೆ ದೀವಿಗೆ

ಗುರಿಯ ಮುಟ್ಟಲು ಬೇಕಿದೆ ದಾರಿ

ಕೈಯ ಹಿಡಿದು ನಡೆಸೊ ಗುರುವು ಬೇಕಿದೆ


1 ಟಿಪ್ಪಣಿ

ಬಂತೊಂದು ಹೊಸ ವರುಷ

ಹಳೆದು ಬಸವಳಿದು
ಕಳೆದೋಯಿತೊಂದು ವರುಷ
ನಲಿದು ನೆಗೆನೆಗೆದು
ಬಂತೊಂದು ಹೊಸ ವರುಷ
 
ಅಂತೆ-ಕಂತೆಯೆಲ್ಲ
ಏಕೆ ಬೇಕು ಬಾಳಲಿ
ಚಿಂತೆ-ಗಿಂತೆಯೆಲ್ಲ
ಮರೆತು ಬಾಳು ಹಸನಾಗಲಿ
 
ಕಂಡ ಕನಸುಗಳು
ನೂರು ಇವೆ ಜೊತೆಯಲಿ
ನಮ್ಮ ಮನಸುಗಳು
ದುಡಿದು ಕನಸೆಲ್ಲ ನನಸಾಗಲಿ
 
ವರುಷವಿಡಿ ಇರಲಿ
ಎಲ್ಲ ನಲಿದಾಡೋ  ಸಂಭ್ರಮ
ನೋವುಗಳೆಲ್ಲ ಮರೆಯಲಿ
ಸುಖಿಸುತ ಆರೋಗ್ಯ ಕ್ಷೇಮ
 
ಹೊಸ ವರುಷವೊಂದು
ಕೋರುತಿದೆ ನಿಮಗೆ ಶುಭಾಶಯ
ವರುಷದ ಹರ್ಷವೊಂದು
ಕಾಯುತಿದೆ ನಿಮ್ಮನ್ನೇ ಮಹಾಶಯ


3 ಟಿಪ್ಪಣಿಗಳು

ಮೌನವೇ ಮಾತಾಗಿ

ನಡೆದು ಬಾ ಬಳಿಗೆ
ಸುಮ್ಮನೆ ಹಾಗೆ
ಮಾತೊಂದು ಆಡಬೇಡ
ನಗುವೊಂದಿರಲಿ ಜೊತೆಗೆ
 
ಕಣ್ಣುಗಳೇ ಮಾತಾಡುವಾಗ
ಬೇರೆ ಮಾತೇಕೆ ಈಗ
ಮೌನದಿ ಹೃದಯದ ಭಾಷೆ
ಕೇಳಲು ಎಂಥ ಸೊಗಸೆ
 
ಪ್ರೀತಿಯ ಮೂಟೆ ಹೊತ್ತು
ಅದರಲಿ ಸಾವಿರ ಕನಸನಿತ್ತು
ಜೊತೆ ಬಾರೆ ಮೆಲ್ಲಗೆ
ಮೌನದ ಆಭರಣ ಇರಲಿ ತೆಳ್ಳಗೆ
 
ಮೌನದಿ ಬೇಡ ಮಾತಿನ ಮೋಹ
ಆರದು ಎಂದು ಪ್ರೀತಿಯ ದಾಹ
ನೀನಿರದ ಸನಿಹ
ಭರಿಸಲಾಗದು ವಿರಹ


ನಿಮ್ಮ ಟಿಪ್ಪಣಿ ಬರೆಯಿರಿ

ನಡುಗುತಿದೆ ಇವನ ನಡೆಗೆ

ಹೆದರಿಕೆ ಶುರುವಾಗಿದೆ
ಯಾಕೋ ಅಮಾವಾಸ್ಯೆಗೆ
ತನ್ನೊಡಲ ಕಗ್ಗತ್ತಲಿನಲೂ
ಸಾಗುವ ಖದೀಮರ ನಿರ್ಭೀತ ನಡೆಗೆ

ಹಣವು ಅಳುತಲಿದೆ
ಹೆಣವು ಅಂಜಿದೆ
ಹಣಕಾಗಿ ಹೆಣವನ್ನು ಕದ್ದೊಯ್ಯುವ
ಲೋಭಿಗಳ ಹಾಳು ನಡೆಗೆ

ಭೂಮಿಯು ನಡುಗುತಿದೆ
ಕಾಡೆಲ್ಲೋ ಮರೆಯಾಗುತಿದೆ
ಕಾಸಿಗಾಗಿ ಮಣ್ಣನು ಬಿಡದ
ಮಾನವನ ಅತಿಆಸೆಯ ನಡೆಗೆ

ನೀರೆಲ್ಲ ನಾಪತ್ತೆ
ಉಸಿರೆಲ್ಲ ವಿಷವಂತೆ
ನೀರಲ್ಲೂ, ಉಸಿರಲ್ಲೂ ವಿಷವ ಹರಡೋ
ದಾನವ ರೂಪಿಯ ನಡೆಗೆ

ನಡುಗುತಿದೆ ಇವನ ನಡೆಗೆ
ಭುವಿ-ಬಾನೆಲ್ಲ
ಮೂಕವಾಗಿಯ ನೋಡುತಿದೆ
ಕಾಯುತ ಕಾಲ


2 ಟಿಪ್ಪಣಿಗಳು

ನೀನಿಲ್ಲದಿರೆ ನಾನೆಲ್ಲಿ

ನಿನ್ನೊಡನೆ
ಮಾತಾಡಲು
ಗುದ್ದಾಡಲು
ಮುದ್ದಾಡಲು
ಬಯಸುತಿದೆ ಮನಸು
ತೋರದಿರು ಮುನಿಸು
ಮರದಂತೆ ನೀನು
ಪಾದದಡಿಯ ಬಳ್ಳಿ ನಾನು
ನಿನ್ನ ನೋಡುತಲೇ
ಹಬ್ಬುವೆನು
ನಿನ್ನ ತೋಳ್ತೆಕ್ಕೆಯಲಿ
ಉಬ್ಬುವೆನು
ನನ್ನ ಉಸಿರಿಂದು
ನಿನ್ನ ಕೈಯಲ್ಲಿ
ನೀನಿಲ್ಲದಿರೆ
ನಾನೆಲ್ಲಿ


ನಿಮ್ಮ ಟಿಪ್ಪಣಿ ಬರೆಯಿರಿ

ಪ್ರೀತಿಯರಮನೆ

ಹೇ ಸಖಿ
ನೋಡುತಲಿದ್ದೆ
ಅನುದಿನವೂ, ಅನುಕ್ಷಣವೂ
ಅನುರಾಗವು
ಎಂದೋ ಮೊಳೆದಿತ್ತು
ನನ್ನ ಕಣ್ಣೋಟವೂ
ನಿನಗೂ ತಿಳಿದಿತ್ತು
 
ಮುಷ್ಟಿ ಗಾತ್ರದ ಹೃದಯದ
ತುಂಬೆಲ್ಲ ನೀನಿದ್ದೆ
ಅದಾಗಿತ್ತು
ನಿನ್ನದೆ ಅರಮನೆ
ನನ್ನದೇ ಪ್ರೀತಿಯ
ತಂಗಾಳಿ ಬೀಸುತಲಿದ್ದೆ
ನಿನ್ನಯ ಮನ ತಣಿಯಲು
 
ಕಾಣದ ಕೈಯೊಂದು
ಕಾಡುತಲಿತ್ತು
ನಮ್ಮಯ ಅನುದಿನದ ಪ್ರೀತಿಯ
ನನ್ನ ಪ್ರೀತಿಯ ತಂಗಾಳಿಗೆ
ವಿಷ ಉಣಿಸಿ
ಪ್ರೀತಿಯರಮನೆಯ ಬರಿದು ಮಾಡಿತು
ಬದುಕು ಮಸಣವಾಯಿತು ಇಂದು


1 ಟಿಪ್ಪಣಿ

ಇರುಳು

ಕತ್ತಲೆಯೊಳು ಮುಳುಗುತಿಹುದು
ಈ ಜಗವ ಬೆಳಗಿದ ಸೂರ್ಯ
ಬೆಳದಿಂಗಳ ಹುಣ್ಣಿಮೆಯೂ
ಇನ್ನಿಲ್ಲ
ಅಮಾವಾಸ್ಯೆ, ಎಲ್ಲೆಲ್ಲೂ ಆವರಿಸಿದೆ
ಬರ-ನೋವು-ಸಾವಿನ
ಕರಿನೆರಳಿನ ಅಟ್ಟಹಾಸ
ಎಲ್ಲರೆದೆಯಲ್ಲು ಪ್ರೀತಿ, ಜ್ಞಾನ
ಕರುಣೆ ತುಂಬುವವರೆಗೂ
ಕಳೆಯದು ಈ ಇರುಳು


ನಿಮ್ಮ ಟಿಪ್ಪಣಿ ಬರೆಯಿರಿ

ಈ ಸೌಂದರ್ಯಕೆ

ಕೆನ್ನೈದಿಲೆಯ ಹುಡಿ ಮಾಡಿ
ಚಂದ್ರನ ಬೆಳದಿಂಗಳ ಹಾಲ ಮಾಡಿ
ಕಲಸಿ ಮಾಡಿದ ಮೊಗ
ಕಡು ಅನ್ಧಕಾರದಲು
ಮಿನುಗುವುದು ಜಗ-ಮಘ

ಜಿಂಕೆಗಳ ಕೊಂದು
ಕಣ್ಣಿಟ್ಟನೊ ಬ್ರಹ್ಮ
ಈ ಸೌಂದರ್ಯಕೆ
ಅಲ್ಲಲ್ಲಿ ಸುಳಿಯುವ
ಹೂವ ಮುಂಗುರುಳು

ಹಂಸಗಳ ವಧೆ ಮಾಡಿ
ರೆಕ್ಕೆಗಳ ಕೊಯ್ದು ತಂದು
ಮಾಡಿದನೆ ಬ್ರಹ್ಮ
ಚೆಲುವೆಯ ಕಣ್ರೆಪ್ಪೆಗಳ

ಹೂವ ಮಕರಂಧವನೆಲ್ಲ
ಕೂಡಿಸಿ
ಹಾಲ ನೊರೆಯಿಂದ ಮುಳುಗಿಸಿ
ಹೆಣೆಯಿತೇ ಬೊಮ್ಮನ ಕೈಗಳು
ಸವಿಯ ಚೆನ್ದುಟಿಯ

ಹಾಲ ಕೊಳದಿ ಬೆಳೆದ
ಕೆಂಪು ಕಮಲವ ಆಯ್ದು ತಂದು
ಜೇನು ಗಂಧಗಳ ಬೆರೆಸಿ
ಅರೆದು ಮಾಡಿದನೆ
ಸೌಗಂಧದ ಚೆಲುವ ಮೈ ಸಿರಿಯ

ಈ ಚೆಲುವೆ
ಕೈ ಯಾಡುವೆಡೆ
ಬಿರುಗಾಳಿ ತಂಗಾಳಿ ಯಾಗುವುದು
ಇವಳು ನಡೆದಾಡು ವೆಡೆ
ಮರುಭೂಮಿ ಹಸಿರು ಕಾನನವಾಗುವುದು

ನಿನ್ನ ಸೌಂದರ್ಯಕೆ
ಪದಗಳೇ ನಿಲುಕವು
ಹಾಡಿ ಹೊಗಳಲೆಂದರೆ
ನಿನ್ನ ನೋಡುತಲೇ
ಎಲ್ಲ ಮರೆವವು

ಹೇಳೆ ಚೆಲುವೆ
ನಿನ್ನ ವರ್ಣಿಸೋ ರಸಿಕನಾರು?
ನಿನ್ನ ಸೌಂದರ್ಯಕೆ
ಸಿಲುಕುವ ಪದಗಳಾವು


2 ಟಿಪ್ಪಣಿಗಳು

ಹೇಳು ನೀನು ನನಗೆ

 

ಹಕ್ಕಿ  ಹಾಡುವ ಮುನ್ನ

ಹೇಳು ನೀನು ನನಗೆ 

ಹಾಡಿನೊಂದಿಗೆ  ಹೃದಯದ 

ಬಡಿತ ಸೇರಿಸಬೇಕಿದೆ 

ಅವಳಿಗೆ   ಪ್ರೀತಿ ತಿಳಿಸಬೇಕಿದೆ

 

ರವಿ ಮೂಡುವ  ಮುನ್ನ 

ಹೇಳು ನೀನು ನನಗೆ 

ಹಾಡೋ ಹಕ್ಕಿಯ  ಕಲೆತು 

ನಾನು ಹಾಡಬೇಕಿದೆ 

ಅವಳಿಗೆ   ಪ್ರೀತಿ ತೋರಬೇಕಿದೆ 

 

ಗಾಳಿ ಸೋಕುವ ಮುನ್ನ  

ಹೇಳು ನೀನು ನನಗೆ 

ಹೂ ಗಂಧ  ತರೋ ತಂಗಾಳಿಗೆ 

 ಪ್ರೀತಿ ಬೆರೆಸಬೇಕಿದೆ 

ಅವಳಿಗೆ  ಪ್ರೀತಿ ನೀಡಬೇಕಿದೆ